ಮಲ್ಲ
ಸು. 1057 ಒಬ್ಬ ಶಾಸನಕವಿ. ಈತ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರಿನ ಒಂದು ಶಾಸನವನ್ನು ಬರೆದಂತೆ ತಿಳಿಯುತ್ತದೆ. ಶಾಸನದಲ್ಲಿ ಈತನನ್ನು ಕವಿರಾಜ ಬಾನ್ದವ, ಸನ್ದ¾õÉಕೆಯವಗಾದ ಮಲ್ಲಂ ಎಂದು ವರ್ಣಿಸಲಾಗಿದೆ. ಇದರಲ್ಲಿ ದೇಕಬ್ಬೆ ಎಂಬ ಸತಿ 1057ರಲ್ಲಿ ಸಹಗಮನ ಮಾಡಿ ಮಹಾಸತಿಯಾದ ವಿಷಯ ನಿರೂಪಣೆಗೊಂಡಿದೆ. ಶಾಸನದಲ್ಲಿರುವ ವೃತ್ತ, ಕಂದ, ಅಕ್ಕರಗಳ ಬಂಧವನ್ನು ನೋಡಿದರೆ ಬರೆದವ ಪ್ರೌಢಕವಿಯೆಂದು ಊಹಿಸಬಹುದಾಗಿದೆ.

ರಾಜೇಂದ್ರಚೋಳನ ಮಾಂಡಲಿಕನಗಿದ್ದ ರವಿಗ ನುಗುನಾಡಿನ (ಈಗಿನ ಹೆಗ್ಗಡದೇವನಕೋಟೆ ತಾಲ್ಲೂಕು) ಅಧಿಪತಿ. ಅವನ ರಾಜಧಾನಿ ಬೆಳತೂರು. ಅವನು ಹುಟ್ಟಿದ ಕುಲ ಶೌರ್ಯ, ದಾನಗಳಿಗೆ ಸುಪ್ರಸಿದ್ಧವಾದುದು. ರವಿಗ ಹುಟ್ಟಿದೊಡನೆ ಅರಿವು ಹುಟ್ಟಿತು. ಅರಿವಿನೊಡನೆ ಆಯ ಹುಟ್ಟತು. ಆಯದೊಡನೆ ಚಾಗ ಹುಟ್ಟಿತು. ಅವನು ಎಷ್ಟು ಪ್ರಭಾವಶಾಲಿಯಾಗಿದ್ದನೆಂದರೆ ರಾಜೇಂದ್ರಚೋಳನಿಂದ ಪಲ್ಲವ ಸತ್ತಿಗೆ, ಶಂಖ ಮುಂತಾದ ಗೌರವಗಳ ಜೊತೆಗೆ ಮಾಂಡಲಿಕ ಪದವಿಯನ್ನು ಪಡೆದಿದ್ದ. ಅವನು ಕುಡಿಯರ ವಲ್ಲಭ, ಕುಡಿಯರಾಭರಣ ಎಂದು ಹೆಸರು ಗಳಿಸಿದ್ದ. ಇಂಥ ರವಿಗನಿಗೂ ವನಿತಾರನ್ನ ಎನ್ನಿಸಿಕೊಂಡ ಪೊನ್ನಕ್ಕನಿಗೂ ದೇಕಬ್ಬೆ ಮಗಳಾಗಿ ಜನಿಸಿದಳು. ಇವಳನ್ನು ನವಿಲೆನಾಡಿನ ದೊರೆ ಏಚನಿಗೆ ಕೊಟ್ಟು ಮದುವೆ ಮಾಡಿದ್ದರು. ಈ ಅನುರೂಪ ದಂಪತಿಗಳು ಸುಖದಿಂದಿರುವಾಗ ಮಹಾಶೂರನಾದ ಏಚನಿಗೂ ಅವನ ದಾಯಾದಿಗಳಿಗೂ ಮನಸ್ತಾಪವಾಗಿ, ಆಗ ನಡೆದ ಯುದ್ಧದಲ್ಲಿ ಏಚನ ಕೈಯಲ್ಲಿ ಅನೇಕರು ಮಡಿದರು. ಆದರೆ ದುರದೃಷ್ಟವಶಾತ್ ಸೆರೆಸಿಕ್ಕಿದ ಏಚನನ್ನು ತಲಕಾಡಿಗೆ ತೆಗೆದುಕೊಂಡುಹೋಗಿ ಶತ್ರುಗಳು ಕೊಂದರು. ಪತಿ ಸತ್ತಮೇಲೆ ತಾನು ಬದುಕಿ ಪ್ರಯೋಜನವಿಲ್ಲವೆಂದು ಹೇಳಿ ದೇಕಬ್ಟೆ ಉರಿಯುವ ಬೆಂಕಿಯನ್ನು ಪ್ರವೇಶಿಸಿ ದೇವಲೋಕಕ್ಕೆ ಹೋದಳು. ಲೋಕ ಅವಳನ್ನೂ ಅವಳ ಚಾರಿತ್ರ್ಯವನ್ನೂ ಮನಸಾರೆ ಹೊಗಳಿತು. ಮಗಳ ಸ್ಮಾರಕವಾಗಿ ರವಿಗ ಶಿಲಾಸ್ತಂಭಗಳನ್ನು ನೆಡಿಸಿದ. ತನ್ನ ಮಗಳು ಬಿಟ್ಟುಕೊಟ್ಟ ಎಲ್ಲ ದತ್ತಿಗಳನ್ನೂ ತನ್ನ ವಂಶದವರು ಪರಿಪಾಲಿಸಲೆಂದು ಶಾಸನದಲ್ಲಿ ಆಶಿಸಿದ್ದಾನೆ.

ಮಲ್ಲ ಬರೆದಿರುವ ಈ ಬೆಳತೂರು ಶಾಸನ ಒಂದು ಉತ್ತಮ ಕಾವ್ಯಬಂಧ. ಕನ್ನಡ ಭಾಷೆಗೆ ರಾಜ ಪ್ರೋತ್ಸಾಹ ಕುಂದಿಹೋಗಿದ್ದ ಚೋಳಾಳ್ವಿಕೆಯ ಕರ್ನಾಟಕ ಭಾಗದಲ್ಲಿ ಮಲ್ಲ ಅಪರೂಪ ಕವಿಯಾಗಿ, ಬಹುಶಃ ಏಕೈಕ ಕವಿಯಾಗಿ ಕಂಡು ಬರುತ್ತ್ತಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ